ಯಾರೋ ಪ್ರಧಾನಿ ಆಗುತ್ತಾರೆಂದು ತಮ್ಮ ಅಧಿಕಾರ ದುರ್ಬಲ ಮಾಡಿಕೊಂಡ ಬೆಪ್ಪುತಕ್ಕಡಿಗಳಿವರು

– ಮಂಜುನಾಥ್ ಎಲ್. ಕೆ.,http://nagnanota.blogspot.in

ಉತ್ತರ ಪ್ರದೇಶ ಮತ್ತು ಬಿಹಾರ, ಈ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ನರೇಂದ್ರ ಮೋದಿಯನ್ನು ಎದುರು ಹಾಕಿಕೊಂಡು ಮುಂಬರುವ ಚುನಾವಣೆಯಲ್ಲಿ ಮುಗ್ಗರಿಸುವತ್ತ ಹೆಜ್ಜೆ ಇರಿಸಿದ್ದಾರೆ. ವೈಯಕ್ತಿಕ ಅಹಂಕಾರದ ಫಲವಾಗಿ ಮುಖ್ಯಮಂತ್ರಿ ಗಾದಿಯನ್ನೇ ಕಳೆದುಕೊಳ್ಳುವಲ್ಲಿ ಮುಂದೆ ಸಾಗುತ್ತಿರುವುದು ವಿಪರ್ಯಾಸ. ಅಷ್ಟಕ್ಕೂ ಇವರೇನು ಉಭಯ ರಾಜ್ಯಗಳು ಕಂಡ ಮಹಾನ್ ನೇತಾರರೇನಲ್ಲ. ಆದರೂ ಯಾರೋ ಪ್ರಧಾನಿ ಆಗಬಾರದು ಎನ್ನಲು ಹೋಗಿ ಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಳ್ಳುತ್ತಿರುವುದರಿಂದ ಈ ವಿಚಾರ ಪ್ರಮುಖವೆನಿಸಿದೆ.
ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಹಾಗೂ ಬಿಹಾರದಲ್ಲಿ ನಿತೀಶ್ ಕುಮಾರ್ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ. ಬಿಜೆಪಿ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುತ್ತಿದ್ದಂತೆ ನಿತೀಶ್ ಎನ್ ಡಿ ಎ ಮೈತ್ರಿಯಿಂದ ಹೊರ ನಡೆದರು. ಬಿಹಾರದಲ್ಲಿ ಜೆಡಿಯುಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂತೆಗೆದುಕೊಂಡಿತು. ಇದರಿಂದ ಆಡಳೀತ ಚುಕ್ಕಾಣಿಯಿಂದ ಹೊರಬೀಳಬೇಕಾದ ಪರಿಸ್ಥಿತಿಯೇನೂ ನಿತೀಶ್ ಅವರಿಗೆ ಇರಲಿಲ್ಲ. ಆದರೆ ಮೋದಿ ಬಗೆಗಿನ ತಾತ್ಸಾರ
ಮನೋಭಾವದಿಂದ ಮುಂದಿನ ಮುಖ್ಯಮಂತ್ರಿ ಆಗುವ ಕನಸು ಮುರುಟುವ ಲಕ್ಷಣಗಳು ಗೋಚರಿಸುತ್ತಿದೆ.
ಉತ್ತರ ಪ್ರದೇಶದಲ್ಲಿ ಕೋಮುವಾದ ಬುಗಿಲೆದ್ದು ಅಪಾರ ಪ್ರಮಾಣದ ಸಾವು ನೋವುಗಳಾದರೂ ಅಖಿಲೇಶ್ ಪರೋಕ್ಷವಾಗಿ ತುಪ್ಪ ಸುರಿದರೇ ಹೊರತು ತಡೆಗಟ್ಟುವ ಕುರಿತು ಕಿಂಚಿತ್ ಯೋಚಿಸಲಿಲ್ಲ. ಈಗಲೇ ಇಷ್ಟಿರುವ ಕೋಮುವಾದದ ಹಿಂಸಾಚಾರ ಮುಂದೆ ಮೋದಿ ಪ್ರಧಾನಿಯಾದರೆ ಇನ್ನೆಷ್ಟಿರಬಹುದು ಎಂಬುದನ್ನು ಪರೋಕ್ಷವಾಗಿ ಸಾರಲು ಬಾಯಿ ಮುಚ್ಚಿ ಕುಳಿತರು ಎಂದರೆ ಅಪವಾದವಲ್ಲ. ಆದರೆ ಅಖಿಲೇಶ್ ಹಾಕಿದ ದಾಳ ಉಲ್ಟ ಹೊಡೆಯುತ್ತಿದೆ. ಅಖಿಲೇಶ್ ಮತ್ತು ಕಾಂಗ್ರೆಸ್ ಕೋಮುವಾದ ಸ್ಪೋಟಿಸಲು ಕಾರಣ ಎಂಬುದು ಅಲ್ಲಿನ ಜನತೆಗೆ ಅರ್ಥವಾದಂತಿದೆ.
ಎಕನಾಮಿಕ್ ಟೈಮ್ಸ್ ನಡೆಸಿದ ಸಮೀಕ್ಷೆ ಪ್ರಕಾರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರ ಎರಡೂ ರಾಜ್ಯಗಳಲ್ಲಿ ಬಿಜೆಪಿಯ ಹೆಚ್ಚಿನ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 10 ಸ್ಥಾನಗಳಷ್ಟೇ ಸಿಕ್ಕಿತ್ತು. ಆದರೆ ಈ ಬಾರಿ 27 ಸೀಟು ಸಿಗುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ 9 ಸ್ಥಾನಗಳನ್ನು ಕಳೆದುಕೊಳ್ಳಲಿದೆ. 2009ರಲ್ಲಿ ಕಾಂಗ್ರೆಸ್ 21 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಆದರೆ ಈ ಬಾರಿ 12 ಸ್ಥಾನಗಳಿಗಷ್ಟೇ ತೃಪ್ತಿ ಪಡೆಯಬೇಕಿದೆ. ಉಳಿದಂತೆ ಬಿ ಎಸ್ ಪಿ ಯತಾಸ್ಥಿತಿ ಕಾಯ್ದುಕೊಂಡು 20 ಸ್ಥಾನ ಪಡೆಯಲಿದೆ. ಎಸ್ ಪಿ 7 ಸ್ಥಾನಗಳನ್ನು ಕಳೆದುಕೊಂಡು 16 ಸ್ಥಾನಗಳಿಗಷ್ಟೇ ತೃಪ್ತಿ ಪಟ್ಟುಕೊಳ್ಳಬೇಕಿದೆ. ಈ ಮೂಲಕ ಅಖಿಲೇಶ್ ಯಾದವ್ ಗೆ ತಾನು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದು ಯುವನಾಯಕ ಎಂಬ ಕಾರಣಕ್ಕಾಗಿ ಮಾತ್ರ ಎಂಬುದರ ಅರಿವಾಗಲಿದೆ.
ಬಿಹಾರದಲ್ಲೂ ಮೋದಿ ಮೋಡಿ ಪ್ರವಹಿಸಲಿದೆ. 2009ರಲ್ಲಿ 12 ಅಭ್ಯರ್ಥಿಗಳಷ್ಟೇ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಹೆಚ್ಚುವರಿಯಾಗಿ 5 ಅಭ್ಯರ್ಥಿಗಳು ಗೆಲ್ಲಲಿದ್ದು ಒಟ್ಟಾರೆ ಬಿಜೆಪಿ 17 ಸ್ಥಾನಗಳಲ್ಲಿ ತನ್ನ ಪ್ರತಾಪ ತೋರಲಿದೆ. ಜೆಡಿಯು ಅರ್ಧ ಮಕಾಡೆ ಮಲಗುವುದಂತೂ ಖಚಿತವಾದಂತಿದೆ. ಬಿಜೆಪಿ ಸಖ್ಯವಿದ್ದಾಗ ಅಭಿವೃದ್ಧಿ ಹರಿಕಾರ ಎಂದೇ ಗುರುತಿಸಲ್ಪಟ್ಟಿದ್ದ ನಿತೀಶ್ ಕುಮಾರ್ ಇಂದು ದಕ್ಷ ಆಡಳಿತದ ರೂವಾರಿ ಸುಶೀಲ್ ಮೋದಿ ಇಲ್ಲದೆ ವೈಫಲ್ಯ ಹೊಂದುತ್ತಿದ್ದಾರೆ. ಇದರಿಂದ ಬೇಸತ್ತಿರುವ ಜನ ಈ ಬಾರಿ ಜೆಡಿಯುವನ್ನು ಹೊರಗಿಡುವ ಆಲೋಚನೆಯಲ್ಲಿ ಇದ್ದಾರೆ. ಕಳೆದ ಬಾರಿ ಎನ್ ಡಿ ಎ ಮೈತ್ರಯೊಂದಿಗೆ ಜೆಡಿಯು 20 ಸ್ಥಾನಗಳಲ್ಲಿ ಗೆದ್ದಿತ್ತು. ಆದರೆ ಈ ಬಾರಿ 10 ಲೋಕಸಭಾ ಕ್ಷೇತ್ರಗಳು ಕೈತಪ್ಪಿ ಹೋಗುವುದಂತೂ ಖಚಿತವಾದಂತಿದೆ. ಕಾಂಗ್ರೆಸ್ ಹೆಚ್ಚುವರಿಯಾಗಿ 2 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಕಾಂಗ್ರೆಸಿಗೆ ಒಟ್ಟು 4 ಕ್ಷೇತ್ರಗಳು ಒಲಿಯಲಿವೆ. ಆರ್ ಜೆ ಡಿ ಹೆಚ್ಚುವರಿಯಾಗಿ 1 ಸ್ಥಾನ ಗೆಲ್ಲುವುದರೊಂದಿಗೆ 4 ಕ್ಷೇತ್ರಗಳನ್ನು ಒಲಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಲಿದೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ ದಿನಗಳೇ ಉರುಳುತ್ತಿದ್ದರೂ ಕಾಂಗ್ರೆಸ್ ಇನ್ನೂ ತೆಪ್ಪಗಿದೆ. ಬಹುತೇಕ ಅಂದಾಜಿನ ಪ್ರಕಾರ ರಾಹುಲ್ ಗಾಂಧಿ ಎಂಬುದು ಪೂರ್ವ ನಿರ್ಧಾರಿತವಾಗಿದ್ದರೂ ಮೋದಿ ಮುಂದೆ ಮುಗ್ಗರಿಸಿದರೆ ಎಂಬ ಅಳುಕು ಕಾಡುತ್ತಲೇ ಇದೆ. ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸದೆ ಚುನಾವಣೆ ಎದುರಿಸಿ ಬಹುಮತ ಪಡೆದರೆ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದು ಉತ್ತಮ ಎಂಬುದು ಕಾಂಗ್ರೆಸ್ ದಾಳ.
akilesh and nitish
ಒಂದು ವೇಳೆ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿಯನ್ನು ಕಣಕ್ಕಿಳಿಸಿ ಲೋಕಸಭೆಯಲ್ಲಿ ಹಿನ್ನಡೆ ಅನುಭವಿಸಿದರೆ ಯುವ ರಾಜನ ವರ್ಚಸ್ಸಿಗೆ ಧಕ್ಕೆಯಾಗಬಾರದು ಎಂಬುದು ಮಾತೆ ಸೋನಿಯಾ ಗಾಂಧಿಯ ಆಲೋಚನೆ. ಅದೇ ವೇಳೆ ಯುವರಾಜನ ವಿರುದ್ಧ ಕುಟುಂಬದೊಳಗೇ ರಾಜಕೀಯ ಆರಂಭವಾಗಿದ್ದು, ರಾಜಕೀಯವೇ ಬೇಡ ಎಂದು ದೂರ ಸರಿದಿದ್ದ ಯುವರಾಣಿ ಪ್ರಿಯಾಂಕ ಮರಳಿ ಬಂದಿರುವುದು ಕಾಂಗ್ರೆಸ್ ಕುಟುಂಬದೊಳಗಿನ ರಾಜಕೀಯಕ್ಕೆ ವೇದಿಕೆ ಸಜ್ಜಾಗಿದೆ. ಕಾಂಗ್ರೆಸ್ ಒಳಗೆ ಇಂತಹ ಬೆಳವಣಿಗೆ ಇದ್ದರೂ, ಮುಂಬರುವ ಲೋಕಸಭೆ ಚುನಾವಣೆ ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ನಡುವಿನ ನೇರ ಕದನ ಎಂದೇ ಮಾರ್ಪಟ್ಟಿದೆ. ವರ್ಚಸ್ಸು, ಅಭಿವೃದ್ಧಿ, ಕೆಲಸ, ಅನುಭವ, ವಯಸ್ಸು ಎಲ್ಲಾ ವಿಭಾಗಗಳಲ್ಲೂ ಮೋದಿಗಿಂತ ಹಿಂದಿರುವುದರಿಂದ ರಾಹುಲ್ ಸರಿಸಾಟಿ ಹೋರಟಗಾರ ಆಗಲಾರ ಎಂಬ ಸತ್ಯವೂ ಕಾಂಗ್ರೆಸಿಗೆ ತಿಳಿದಿದೆ.
ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವೆ ಪ್ರಧಾನಿಯಾಗಿ ಯಾರನ್ನು ಬಯಸುತ್ತೀರಿ ಎಂಬ ಕುರಿತಾದ ಸಮೀಕ್ಷೆಗಳು ಈಗಾಗಲೇ ನಡೆಯುತ್ತಿದೆ. ಉತ್ತರ ಪ್ರದೇಶ ಮತ್ತು ಬಿಹಾರದ ನಾಡಿ ಮಿಡಿತವನ್ನು ಚೆಕ್ ಮಾಡಿರುವ ಎಕನಾಮಿಕ್ ಟೈಮ್ಸ್ ಮೋದಿ ಪ್ರಧಾನಿಯಾಗಬೇಕು ಎಂಬ ಆಶಯ ಉಭಯ ರಾಜ್ಯಗಳಲ್ಲೂ ಇದೆ ಎಂಬುದನ್ನು ಸ್ಪಷ್ಟ ಪಡಿಸಿದೆ. ಉತ್ತರ ಪ್ರದೇಶದಲ್ಲಿ ಮೋದಿ ಪರ ಶೇಕಡಾ 50 ರಷ್ಟು ಒಲವು ಗಳಿಸಿದರೆ ರಾಹುಲ್ ಗಾಂಧಿ ಪರ ಒಲವು ಮೂಡಿದ್ದು ಕೇವಲ ಶೆಕಡಾ 9 ರಷ್ಟು. ಬಿಹಾರದಲ್ಲೂ ರಾಹುಲ್ ಗಾಂಧಿಗೆ ಹಿನ್ನಡೆಯಾಗಿದೆ. ರಾಹುಲ್ ಪರ ಶೇಕಡಾ 19 ಕೈ ಎತ್ತಿದರೆ ಮೋದಿ ಪರ ಶೇಕಡಾ 47 ಜೈ ಹೇಳಿದ್ದಾರೆ.
ಈ ಮಾಹಿತಿಗಳನ್ನು ನೋಡಿದಾಗ ಯುವನಾಯಕ ಅಖಿಲೇಶ್, ಹಾಗೂ ಸಮಾಜವಾದಿ ಹಿನ್ನಲೆಯವರೇ ಆದ ನಿತೀಶ್ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಇವರಿಬ್ಬರ ರಾಜಕೀಯ ಜೀವನಕ್ಕೆ ಇದೇ ಬಿರುಕಾಗುವ ಸಾಧ್ಯತೆ ಹೆಚ್ಚು. ಮೋದಿ ನಾಯಕತ್ವದ ಎನ್ ಡಿ ಎ ಕೂಟವನ್ನು ಬೆಂಬಲಿಸಿದರೆ ಇವರಿಬ್ಬರಿಗೂ ರಾಜಕೀಯವಾಗಿಯೂ ಪ್ರಾಮುಖ್ಯತೆ ಇದೆ. ಆದರೆ ಅಲ್ಪಸಂಖ್ಯಾತ ಮತಬ್ಯಾಂಕಿಗೋಸ್ಕರ ಮೋದಿ ವಿರೋಧಿ ನಿಲುವು ತಳೆದಿರುವ ಇವರ ನಡುವೆಯೇ ಮುಸ್ಲಿಮರಲ್ಲಿ ಮೋದಿ ಪರ ಒಲವು ಮೂಡುತ್ತಿರುವುದು ಹೊಸ ರಾಜಕೀಯ ಮನ್ವಂತರಕ್ಕೆ ನಾಂದಿ ಹಾಡಿದೆ. ಹಾಗಾದರೆ ಮುಂದಿನ ಬಾರಿ ರಾಜ್ಯದ ಚುಕ್ಕಾಣಿ ಕಳೆದುಕೊಳ್ಳಲಿದ್ದಾರ ಅಖಿಲೇಶ್ ಹಾಗೂ ನಿತಿಶ್?